ಎಪ್ರಿಕ 
ಲಿಲಿಯೇಸಿ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಸಸ್ಯ. ಇವು ಆಫ್ರಿಕ ದೇಶದ ಕೇಫ್ ಪ್ರಾವಿನ್ಸಿನ ಮೂಲವಾಸಿಗಳು. ಬಹುಮಟ್ಟಿಗೆ ಹವೊರ್‍ತಿಯ ಜಾತಿಯ ಸಸ್ಯಗಳನ್ನು ಹೋಲುತ್ತದೆ. ಮನೆಯ ಅಲಂಕಾರ ಸಸ್ಯವಾಗಿ ಕಲ್ಲೇರಿ ಸಸ್ಯವಾಗಿ ಇವುಗಳ ಬಳಕೆ ಸಾಮಾನ್ಯ. ಈ ಸಸ್ಯದಲ್ಲಿ ಎಲೆಯ ಗುಂಪುಗಳು ಕಾಂಡದಂತೆ ಮುಂದುವರಿದಿವೆ. ಎಲೆಯ ಅಂಚುಗಳಲ್ಲಿ ಉದ್ದಕ್ಕೂ ಹಲ್ಲುಗಳಂತಿರುವ ಮುಳ್ಳುಗಳಿವೆ. 

ಎಪ್ರಿಕ ಅಸ್ಟೆರ : 	ಈ ಪ್ರಭೇದ ರಸಯುಕ್ತ, ದೀರ್ಘಾವಧಿ ಸಸ್ಯ. ಎಲೆಗಳು ಸುರುಳಿಗೊಂಡಿದೆ. ಬಣ್ಣ ಹಸಿರು, ಮೇಲುಭಾಗ ಒರಟು. ಕೆಳಭಾಗದಲ್ಲಿ ಎರಡು ಉಬ್ಬುಗಳು (ಕೀಲ್) ಇದ್ದು, ಇವುಗಳ ಮೇಲೆ ಗಂಟುಗಳಿವೆ. 

ಎಪ್ರಿಕ ಬೈಕಾರಿನೇಟ : ಈ ಪ್ರಭೇದದ ಒತ್ತಿರಿಸಿದ ಒರಟು ಎಲೆಗಳು ತ್ರಿಕೋಣಾಕಾರವಾಗಿದೆ. ಬಣ್ಣ ನಸು ಹಸಿರು. ಅಂಚು ಮತ್ತು ತಳಭಾಗದಲ್ಲಿರುವ ಎರಡು ಉಬ್ಬುಗಳು ಸಮಾನಾಂತರವಾಗಿವೆ. ತುದಿ ಮೊನಚು. ಎತ್ತರಿಸಿದ ಬಿಳಿಯ ಗಂಟು ಸಾಲುಗಳು ಕೆಳಭಾಗದಲ್ಲೂ ಚಿಕ್ಕ ಬಿಳಿಯ ಗಂಟು ಸಾಲುಗಳು ಅಡ್ಡಲಾಗಿಯೂ ಇವೆ. 

ಎಪ್ರಿಕ ಡೆಲ್ಟೋಯಿಡಿಯ : ಈ ಪ್ರಭೇದದ ಕಾಂಡ ನೆಲದ ಮೇಲೆ ಗುಲಾಬಿ ಹೂವಿನ ಆಕಾರದಲ್ಲಿದೆ. ತ್ರಿಕೋಣಾಕಾರದ ಹಸಿರು ಎಲೆಗಳು ಐದು ಸಾಲುಗಳಲ್ಲಿ ಹರಡಿದ್ದು ಮೆದುವಾಗಿವೆ. ಬಣ್ಣ ಹಸಿರು, ಅಂಚು ಗಟ್ಟಿ, ತುದಿ ಮೊನಚು. 
ಎಪ್ರಿಕ ಪೆಂಟಗೋನ : ಈ ಪ್ರಭೇದದ ಕಾಂಡ ಗುಲಾಬಿ ಹೂವಿನಾಕಾರದಲ್ಲಿದೆ. ಒರಟಾಗಿರುವ, ಭರ್ಜಿಯಾಕಾರದ, ಹೊಳೆಯುವ, ನಸು ಹಸಿರು ಬಣ್ಣದ, ಮೊನಚು ತುದಿಯ ಎಲೆಗಳು ನೇರವಾಗಿರುವ ಐದು ಸಾಲುಗಳಲ್ಲಿವೆ.		 

  (ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ